ಮನುಷ್ಯ ಕಷ್ಟಪಟ್ಟು ಬೆಳೆಯುವ ಆಹಾರವನ್ನು ದಾಸ್ತಾನು ಮಾಡಿದಾಗ ಕೀಟಗಳು, ಇಲಿಗಳು ಮತ್ತು ಬೂಷ್ಟುಗಳು ಅದನ್ನು ಹಾಳು ಮಾಡುತ್ತವೆ. ಹೀಗೆ ನಷ್ಟವಾಗುವ ಧಾನ್ಯ, ಕಾಳು ಮುಂತಾದುವನ್ನು ಸಂರಕ್ಷಿಸಲು ಕೀಟನಾಶಕ ಔಷಧಿಗಳು, ಇಲಿ ಪಾಷಾಣ, ರಾಸಾಯನಿಕ ದ್ರವ್ಯ ಮೊದಲಾದುವನ್ನು ಉಪಯೋಗಿಸಲಾಗುತ್ತದೆ. ಚೀಲಗಳನ್ನೂ ಉಗ್ರಾಣವನ್ನೂ ಔಷಧಗಳಿಂದ ಸಿಂಪಡಿಸುವಿಕೆ, ಚೀಲಗಳ ಜೋಡಣೆ ಮತ್ತು ಉಗ್ರಾಣದ ಸಮರ್ಪಕ ರಚನೆ ಮುಂತಾದವುಗಳ ವಿಚಾರವಾಗಿ ಇಲ್ಲಿ ಪ್ರಯೋಗಗಳು ನಡೆಯುತ್ತವೆ. ಹೆಚ್ಚು ಪರಿಣಾಮಕಾರಿಗಳಾದ ಕೀಟನಾಶಕ ಔಷಧಗಳ ತಯಾರಿಕೆಯ ಬಗ್ಗೆಯೂ ಸಂಶೋಧನೆಗಳು ಆಗುತ್ತಿವೆ. ಇಲಿಗಳನ್ನು ಹೊಲಗದ್ದೆಗಳಲ್ಲೂ ಉಗ್ರಾಣಗಳಲ್ಲೂ ಯುಕ್ತ ಪಾಷಾಣಗಳಿಂದ ಹೇಗೆ, ಯಾವ ಸಲಕರಣೆಗಳನ್ನುಪಯೋಗಿಸಿ ನಾಶಪಡಿಸಬಹುದೆಂಬುದನ್ನು ಕಂಡುಕೊಳ್ಳಲಾಗಿದೆ. ಇದನ್ನು ಅನೇಕ ಕಡೆ ಪ್ರಚಾರಕ್ಕೆ ತರಲಾಗಿದೆ. ಈ ವಿಭಾಗದಲ್ಲಿ ನಡೆದ ಕೆಲಸದ ಉಪಯೋಗದಿಂದ ದೇಶದಲ್ಲಿ ನಷ್ಟವಾಗುತ್ತಿದ್ದ ಲಕ್ಷಾಂತರ ಟನ್ನುಗಳಷ್ಟು ಆಹಾರ ಪದಾರ್ಥಗಳನ್ನು ಈಗ ಸಂರಕ್ಷಿಸಲಾಗುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ